Friday, May 4, 2018

ಬಾಲ ಕಾಂಡ - ಸರ್ಗ 1 - ಶ್ಲೋಕ #1

ವಾಲ್ಮೀಕಿರಾಮಾಯಣಮ್

ಬಾಲಕಾಂಡ - ಪ್ರಥಮಃ ಸರ್ಗಃ

ಸರ್ಗದ ಸಾರಾಂಶ -

ತಮ್ಮ ಆಶ್ರಮಕ್ಕೆ ಆಗಮಿಸಿದ ನಾರದರನ್ನು ಕುರಿತು ಲೋಕದಲ್ಲಿ ಎಲ್ಲರಿಗಿಂತಲೂ ಉತ್ತಮನಾದ ಪುರುಷನು ಯಾರು? ಎಂದು ವಾಲ್ಮೀಕಿಗಳ ಪ್ರಶ್ನೆ. ಅದಕ್ಕೆ ಉತ್ತರವಾಗಿ ನಾರದರು ಈ ಲೋಕದಲ್ಲಿ ಉತ್ತಮನಾದ ಪುರುಷನೆಂದರೆ, ಸರ್ವಗುಣಸಂಪನ್ನನಾದ ಶ್ರೀರಾಮಚಂದ್ರನೆಂದು ನಾರದರ ಉತ್ತರ. ಸಂಕ್ಷೇಪವಾಗಿ ಸಮಗ್ರ ರಾಮಾಯಣದ ಉಪದೇಶ ಮತ್ತು ರಾಮಾಯಣದ ಶ್ರವಣದಿಂದಾಗುವ ಫಲಕಥನ.

ತಪಃಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್ |
ನಾರದಂ ಪರಿಪಪ್ರಚ್ಛ ವಾಲ್ಮೀಕಿರ್ಮುನಿಪುಂಗವಮ್               ||೧||


ತಾತ್ಪರ್ಯ -


ನಾರದರು ತಪಸ್ಸು ಮತ್ತು ವೇದಾಧ್ಯಯನಗಳಲ್ಲಿ ಬಲು ಆಸಕ್ತರು. ವೇದಾರ್ಥವನ್ನು ಬಲ್ಲವರಲ್ಲಿ ಅಗ್ರೇಸರರು. ಮುನಿಜನರಲ್ಲಿ ಶ್ರೇಷ್ಠರು. ಜ್ಞಾನಿಗಳಾದ ಇಂಥ ನಾರದರು ತಮ್ಮ ಆಶ್ರಮಕ್ಕೆ ಆಗಮಿಸಿರುವುದರಿಂದ ವಾಲ್ಮೀಕಿಗಳು ಬಹಳ ಸಂತೋಷಪಟ್ಟಿದ್ದಾರೆ. ಅವರನ್ನು ಸತ್ಕರಿಸಿ ಶ್ರದ್ಧೆಯಿಂದ ಪ್ರಶ್ನೆಯನ್ನು ಮಾಡುತ್ತಿದ್ದಾರೆ.

ವ್ಯಾಖ್ಯಾನ - 

ತಪಃಸ್ವಾಧ್ಯಾಯನಿರತಂ = ೧. ತಪಃ = ಚಾಂದ್ರಾಣಾಯಾದಿ ವ್ತರಗಳಲ್ಲಿ, ಸ್ವಾಧ್ಯಾಯ = ವೇದಾಧ್ಯಯನದಲ್ಲಿ, ೨. ತಪಃ = ಜ್ಞಾನ ಅಥವಾ ಧ್ಯಾನಯೋಗದಲ್ಲಿ, ಸ್ವಾಧ್ಯಾಯ = ವೇದದಲ್ಲಿ. ೩. ತಪಃ = ವೇದಾಧ್ಯಯನದಲ್ಲಿ, ಸ್ವಾಧ್ಯಾಯ = ಜಪದಲ್ಲಿ. ೪. ತಪಃ = ಬ್ರಹ್ಮನನ್ನೇ ಪ್ರತಿಪಾದನೆ ಮಾಡುವ, ಸ್ವಾಧ್ಯಾಯ = ವೇದಾಂತದಲ್ಲಿ, ೫. ತಪಃ = ವ್ಯಾಕರಣವೇ ಮೊದಲಾದ ಷಡಂಗಗಳಿಂದ ಕೂಡಿದ, ಸ್ವಾಧ್ಯಾಯ = ವೇದಾಧ್ಯಯನದಲ್ಲಿ. ೬. ತಪಃ = ಸ್ವಶಾಖಾ- ರೂಪವಾದ, ಸ್ವಾಧ್ಯಾಯ = ವೇದಾಧ್ಯಯನದಲ್ಲಿ. ೭. ತಪಃ = ಬ್ರಹ್ಮನನ್ನು ಗಾನಮೂಲಕವಾಗಿ ಪ್ರಶಂಸೆ ಮಾಡುವ ಸಾಮವೇದದ, ಸ್ವಾಧ್ಯಾಯ = ಅಧ್ಯಯನದಲ್ಲಿ. ೮. ತಪಃ = ಮನಃ ಪ್ರಸಾದಕ್ಕೆ ಕಾರಣವಾದ ವ್ರತನೇಮ ಉಪವಾಸಾದಿ ಕ್ರಮಗಳಲ್ಲಿ, ಸ್ವಾಧ್ಯಾಯ = ವೇದಾಧ್ಯಯನದಲ್ಲಿ. ೯. ತಪಃ = ಬ್ರಹ್ಮಜ್ಞಾನವನ್ನು ಉಂಟುಮಾಡುವ ಸ್ವಾಧ್ಯಾಯ = ವೇದಾಧ್ಯಯನದಲ್ಲಿ, ನಿರತಂ = ಆಸಕ್ತನಾದ



೧. ವಾಗ್ವಿದಾಂ ವರಮ್ = ವಾಕ್= ವೇದವನ್ನು, ವಿದಾಂ = ತಿಳಿದವರಲ್ಲಿ, ವರಮ್ = ಶ್ರೇಷ್ಠನಾದ. ೨. ವೇದ ಅಥವಾ ವೇದಾರ್ಥಗಳನ್ನು ತಿಳಿದವರಲ್ಲಿ ಶ್ರೇಷ್ಠನಾದ ವ್ಯಾಕರಣ ಮೊದಲಾದ ಷಡಂಗಗಳಿಂದ ಸಹಿತವಾದ ವೇದಾಧ್ಯಯನವನ್ನು ಮಾಡಿದವರಲ್ಲಿ ಉತ್ತಮನಾದ.



೨. ಶಾಸ್ತ್ರವನ್ನು ತಿಳಿದವರಲ್ಲಿ ಉತ್ತಮನಾದ, ೩. ಸರಸ್ವತಿಯ ಮಕ್ಕಳಾದ ಮರೀಚಿ ಮೊದಲಾದ ಮಕ್ಕಳಲ್ಲಿ ಶ್ರೇಷ್ಠರಾದ, ೪. ಸ್ವರೂಪತಃ ಅರ್ಥತಃ ಧರ್ಮತತ್ವವನ್ನು ತಿಳಿದವರಲ್ಲಿ ಶ್ರೇಷ್ಠನಾದ

ಮುನಿಪುಂಗವಂ = ಮನನಶೀಲರಲ್ಲಿ ಶ್ರೇಷ್ಠನಾದ, ನಾರದಂ =



೧. ನರಸಂಬಂಧಿಯಾದ ಅಜ್ಞಾನವನ್ನು ನಾಶಗೊಳಿಸುವ ಋಷಿಶ್ರೇಷ್ಠನಾದ ನಾರದರನ್ನು. ೨. ಜ್ಞಾನವನ್ನು ತಂದುಕೊಡುವ ಗುರುಗಳನ್ನು. ೩. ಪರಮಾತ್ಮನನ್ನು ಹೊಂದಲು ಉಪಯುಕ್ತವಾದ ಜ್ಞಾನವನ್ನು ಉಪದೇಶಿಸುವ ಅಪರೋಕ್ಷ ಗುರುಗಳನ್ನು, ೪. ನಾರದಮುನಿಯನ್ನು .



ತಪಸ್ವೀ = ೧. ಉತ್ತಮವಾದ ತಪಸ್ಸುಳ್ಳ, ೨. ಮೋಕ್ಷಾಭಿಲಾಷೆಯುಳ್ಳ ಶಮದಮಾದಿಸಂಪತ್ತುಗಳ್ಳ, ೩. ಬ್ರಹ್ಮಜ್ಞಾನ ಸಾಧನರೂಪವಾದ ತಪಸ್ಸುಳ್ಳ, ೪. ವ್ಯಾಕರಣಶಾಸ್ತ್ರವೇ ಮೊದಲಾದ ಷಡಂಗಗಳಿಂದ ಸಹಿತವಾದ ಉಪನಿಷತ್ತುಗಳಿಂದ ಸಹಿತವಾದ ವೇದಾಧ್ಯಯನದಿಂದ ಕೂಡಿರುವ, ಅಥವಾ ಭಗವಂತನಲ್ಲಿ ಮಾತ್ರ ಶರಣಾಗತಿ ರೂಪವುಳ್ಳ ತಪಸುಳ್ಳ,



೫. ಕೃಚ್ಛ್ರ ಚಾಂದ್ರಾಯಣಾದಿ ತಪಸ್ಸುಳ್ಳ, ವಾಲ್ಮೀಕಿಃ = ವಾಲ್ಮೀಕಿಋಷಿಗಳು, ಪರಿಪಪ್ರಚ್ಛ = ಸತ್ಕರಿಸಿ ಪ್ರಶ್ನಿಸಿದರು.



ವಿಶೇಷವಿಚಾರ - ತಮ್ಮ ಆಶ್ರಮಕ್ಕೆ ಆಗಮಿಸಿದ ನಾರದರನ್ನು ನೋಡಿ ವಾಲ್ಮೀಕಿಮಹರ್ಷಿಗಳಿಗೆ ಆಶ್ಚರ್ಯ ಹಾಗೂ ಸಂತೋಷಗಳು ಉಂಟಾಗಿವೆ. ಬಂದಿರುವ ನಾರದರಿಗೆ ಪೂಜೆಯನ್ನು ಮಾಡಿ ಆಸನದಲ್ಲಿ ಕುಳ್ಳಿರಿಸಿ ಪ್ರಶ್ನೆ ಮಾಡಲು ಪ್ರಾರಂಭಿಸಿದ್ದಾರೆ. ಅವರ ಪ್ರಶ್ನೆಗೆ ನಾರದರು ರಾಮಾಯಣವನ್ನು ಉಪದೇಶಿಸುತ್ತಾರೆ. ಮೊದಲನೆಯ ಸರ್ಗವು ನಾರದರು ವಾಲ್ಮೀಕಿಗಳಿಗೆ  ಉಪದೇಶಿಸಿದ ರಾಮಾಯಣವನ್ನು ಹಾಗೂ ಪಾರಾಯಣದ ಫಲವನ್ನು ನಿರೂಪಣೆ ಮಾಡಲಾಗಿದೆ.



ಈ ಶ್ಲೋಕದಲ್ಲಿ ‘ತಪಸ್ವೀ’ ಎಂಬ ಪದವು ವಾಲ್ಮೀಕಿಗೆ ವಿಶೇಷಣವಾಗಿದೆ ಎಂಬುದನ್ನು ಗಮನಿಸಬೇಕು. ಉಳಿದೆಲ್ಲ ವಿಶೇಷಣಗಳು ನಾರದರಿಗೆ ವಿಶೇಷಣವಾಗಿದೆ.



ಗ್ರಂಥದ ಪ್ರಾರಂಭದಲ್ಲಿ ‘ತಪ’ ಎಂಬ ಶಬ್ದವನ್ನು ಪ್ರಯೋಗ ಮಾಡಿದ್ದರಿಂದ ಬ್ರಹ್ಮನನ್ನು ಪ್ರತಿಪಾದನೆ ಮಾಡುವ ಮೂಲಕ ಮಂಗಳಾಚರಣೆಯನ್ನು ಮಾಡಿದಂತಾಯಿತು.



೧. ರಾಮಾಯಣವು ಗಾಯತ್ರ್ಯಕ್ಷರ ಸಂಖ್ಯೆಗೆ ಅನುಗುಣವಾಗಿದೆ. ಇಪ್ಪತ್ತ್ನಾಕು ಅಕ್ಷರವುಳ್ಳ ಗಾಯತ್ರಿಯ ವ್ಯಾಖ್ಯಾನ ರೂಪವಾಗಿ ೨೪೦೦೦ ಶ್ಲೋಕಗಳಿಂದ ಕೂಡಿದೆ. ಪ್ರತಿಯೊಂದು ಸಹಸ್ರಾದಿಯು ಆಯಾ ಗಾಯತ್ರ್ಯಕ್ಷರಗಳಿಂದಲೇ ಪ್ರಾರಂಭವಾಗುತ್ತಿದೆ. ಮೊದಲ ಸಹಸ್ರಾದಿಯಲ್ಲಿ ಗಾಯತ್ರಿಯ ಪ್ರಥಮಾಕ್ಷರವಾದ ‘ತ’ ಎಂಬ ಅಕ್ಷರವು ಹೇಳಲ್ಪಟ್ಟಿದೆ. ಮತ್ತು ಈ ‘ತ’ಕಾರವು ಗ್ರಂಥಕರ್ತೃವಿಗೂ, ಗ್ರಂಥಾಧೇತೃಗಳಿಗೂ ಕೀರ್ತಿಯನ್ನು ತಂದುಕೊಡುತ್ತದೆ.



೨. ‘ಸ್ವಾಧ್ಯಾಯನಿರತಂ’ ಎಂಬುದರಿಂದ ಗುರುಗಳಾದ ನಾರದರಲ್ಲಿ ಶ್ರೋತ್ರಿಯತ್ವವೂ, ‘ವಾಗ್ವಿದಾವರಂ’ ಎಂಬುದರಿಂದ ವಿದ್ವತ್ವವು, ‘ಮುನಿಪುಂಗವಂ’ ಎಂಬುದರಿಂದ ಬ್ರಹ್ಮನಿಷ್ಠತ್ವವನ್ನು ತಿಳಿಸಿದಂತಾಯಿತು. ಆದ್ದರಿಂದ ಗುರುಗಳಲ್ಲಿರಬೇಕಾದ ಎಲ್ಲ ಗುಣಗಳು ನಾರದರಲ್ಲಿದೆ ಇಂಥ ಗುರುಗಳನ್ನೇ ಶಿಷ್ಯರಾದ ವಾಲ್ಮೀಕಿಗಳು ತತ್ವಜ್ಞಾನದ ಅಪೇಕ್ಷೆಯಿಂದ ಉಪಸತ್ತಿ ಮಾಡಿ ಪ್ರಶ್ನಿಸುತ್ತಿದ್ದಾರೆಂದು ತಿಳಿಯಬೇಕು.



‘ಪರಿಪಪ್ರಚ್ಛ’ ಎಂಬ ಕ್ರಿಯಾಪದವು ತಿಳಿಯಲೇ ಬೇಕಾದದ್ದನ್ನು ಅವಶ್ಯವಾಗಿ ತಿಳಿಸಿರಿ ಎಂಬ ವಿನಯಪೂರ್ವಕವಾದ ಜಿಜ್ಞಾಸೆಯನ್ನು ಪ್ರತಿಬಿಂಬಿಸುತ್ತಿದೆ ಎಂಬ ಜಿಜ್ಞಾಸೆಯಲ್ಲಿರುವ ಔತ್ಕಂಠ್ಯವನ್ನೂ ಕೂಡ ತೋರಿಸುತ್ತಿದೆ. ಮತ್ತು ‘ಪರಿ’ ಎಂಬ ಉಪಸರ್ಗಕ್ಕೆ ಸತ್ಕಾರ ಮಾಡಿ ಎಂಬರ್ಥವನ್ನು ವಿವಕ್ಷಿಸಿದಾಗ ಗುರುಗಳನ್ನು ಪೂಜಿಸಿ, ಪ್ರಶ್ನಿಸಿದರು ಎಂಬರ್ಥವನ್ನು ಹೇಳುತ್ತಿದೆ.



ಈ ಮೊದಲ ಶ್ಲೋಕದಲ್ಲಿ ಸಂದರ್ಭವನ್ನು ನಿರೂಪಣೆ ಮಾಡಿ, ಮುಂದಿನ ‘ಕೋನ್ವಸ್ಮಿನ್’ ಎಂಬ ಇತ್ಯಾದಿ ಮೂರು ಶ್ಲೋಕಗಳಿಂದ ವಾಲ್ಮೀಕಿಗಳು ನಾರದರ ಬಳಿ ಏನು ಪ್ರಶ್ನೆಯನ್ನು ಕೇಳಿದರೆಂಬುದನ್ನು ನಿರೂಪಣೆ ಮಾಡಿದ್ದಾರೆ.



‘ತಪಃಸ್ವಾಧ್ಯಾಯನಿರತಂ’ - ೧. ತಪಶ್ಚ ಸ್ವಾಧ್ಯಾಯಶ್ಚ ತಪಃ ಸ್ವಾಧ್ಯಾಯೌ ತಪಃ ಸ್ವಾಧ್ಯಾಯಯೋಃ ನಿರತಂ ತಪಃಸ್ವಾಧ್ಯಾಯನಿರತಂ’ ಎಂದು ವಿಗ್ರಹ ಮಾಡಿದಾಗ ತಪಸ್ಸು ಹಾಗೂ ಸ್ವಾಧ್ಯಾಯಗಳಲ್ಲಿ  ನಾರದರು ನಿರತರಾಗಿದ್ದಾರೆ ಎಂಬರ್ಥವು ತಿಳಿಯುತ್ತದೆ. ಇಲ್ಲಿ ಸ್ವಾಧ್ಯಾಯ ಶಬ್ದಕ್ಕೆ ‘ಸ್ವಾಧ್ಯಾಯೋ ವೇದತಪಸೋಃ’ ಎಂಬ ಮಾತಿನಂತೆ ವೇದ ಎಂದರ್ಥ. ತಪಸ್ಸು ಮತ್ತು ಅಧ್ಯಯನಗಳು ಬಹಳ ಪ್ರಧಾನವಾದ್ದರಿಂದ ಪ್ರಾರಂಭದಲ್ಲಿಯೇ

ಈ ಗುಣಗಳನ್ನು ಉಲ್ಲೇಖಿಸಿದ್ದಾರೆ.

ತಪೋ ವಿದ್ಯಾಚ ವಿಪ್ರಶ್ಚ ನಿಃಶ್ರೇಯಸಕರಂ ಪರಂ  |

ತಪಸಾ ಕಲ್ಮಷಂ ಹಂತಿ ವಿದ್ಯಯಾ ಜ್ಞಾನಮಶ್ನುತೇ  ||



ತಪಸ್ಸು ಹಾಗೂ ವಿದ್ಯೆಗಳು ಬ್ರಾಹ್ಮಣನಿಗೆ ಮೋಕ್ಷದಾಯಕವಾಗಿವೆ. ತಪಸ್ಸಿನಿಂದ ಕಲ್ಮಶಗಳು ಪರಿಹಾರವಾಗುತ್ತವೆ. ವಿದ್ಯೆಯಿಂದ ತತ್ವಜ್ಞಾನಿಯಾಗುತ್ತಾನೆ.



೨. ತಪಸ್ಸು ಎಂಬ ಪದಕ್ಕೆ ಜ್ಞಾನ ಎಂದರ್ಥ. ‘ತಪ ಆಲೋಚನೇ’ ಎಂಬ ಧಾತುವಿನಿಂದ ನಿಷ್ಪನ್ನವಾದ ಶಬ್ದವಾಗಿರುವುದರಿಂದ ಮತ್ತು ‘ಯಸ್ಯ ಜ್ಞಾನಮಯಂ ತಪಃ’ ಎಂಬ ಶ್ರುತಿಪ್ರಮಾಣ ಇರುವುದರಿಂದ ತಪಃ ಎಂಬ ಪದವು ಜ್ಞಾನಾರ್ಥದಲ್ಲಿದೆ. ಸ್ವಾಧ್ಯಾಯ ಶಬ್ದಕ್ಕೆ ವೇದ ಎಂದರ್ಥ. ಆದ್ದರಿಂದ ಜ್ಞಾನ ಮತ್ತು ವೇದಾಧ್ಯಯನಗಳಲ್ಲಿ ಆಸಕ್ತರಾದವರು ಎಂಬರ್ಥವು ದೊರೆಯುತ್ತದೆ.



೩. ‘ತಪೋ ಹಿ ಸ್ವಾಧ್ಯಾಯಃ’ ಎಂಬ ಶ್ರುತಿಯಂತೆ ವೇದಾಧ್ಯಯನವೇ ತಪಸ್ಸು ಎಂದು ಕರೆಸಿಕೊಳ್ಳುತ್ತದೆ. ‘ಸ್ವಾಧ್ಯಾಯೋ ವೇದ ಜಪಯೋಃ’ ಎಂಬ ಮಾತಿನಂತೆ ಸ್ವಾಧ್ಯಾಯ ಶಬ್ದವು ಜಪ ಎಂದರ್ಥದಲ್ಲಿದೆ. ಆದ್ದರಿಂದ ‘ಸ್ವಾಧ್ಯಾಯಾತ್ ಮಾ ಪ್ರಮದಃ’ (ತೈ,ಉ) ‘ವೇದಮೇವ ಜಪೇನ್ನಿತ್ಯಂ’ ಎಂಬ ಪ್ರಮಾಣದಂತೆ ವೇದಾಧ್ಯಯನ ಹಾಗೂ ಜಪಗಳಲ್ಲಿ ನಿರತರಾದವರು ಎಂದರ್ಥ.



೪. ‘ತಪತ್ವೇನ ಶ್ರುತಃ ಸ್ವಾಧ್ಯಾಯಃ ತಪಃಸ್ವಾಧ್ಯಾಯಃ’ ವೇದಾಧ್ಯಯನವನ್ನೇ ತಪಸ್ಸನ್ನಾಗಿ ಆಚರಣೆ ಮಾಡುವವರು ಎಂಬುದು ಮತ್ತೊಂದು ಅರ್ಥ. ಮುನಿಪುಂಗವ ಶಬ್ದದಿಂದಲೇ ತಪಸ್ಸು ಮಾಡುವರಲ್ಲಿ ಅಗ್ರೇಸರರು ಎಂಬರ್ಥವು ದೊರೆಯುವುದರಿಂದ ಇಲ್ಲಿರುವ ತಪಃ ಎಂಬ ಪದಕ್ಕೆ ಸ್ವಾಧ್ಯಾಯವನ್ನೇ ತಪಸ್ಸು ಎಂಬುದಾಗಿ ತಿಳಿಯಬೇಕು. ಈ ಅರ್ಥದಲ್ಲಿ ತಪಶ್ಚ ಸ್ವಾಧ್ಯಾಯಶ್ಚ ತಪಃಸ್ವಾಧ್ಯಾಯೌ ಎಂಬ ದ್ವಂದ್ವಸಮಾಸವನ್ನು ಮಾಡಬಾರದು. ‘ವಾಗ್ವಿದಾಂ ವರಮ್’ ವೇದಾಧ್ಯಯನವನ್ನು ಮಾಡಿ ಮತ್ತೊಬ್ಬರಿಗೆ ಉಪದೇಶಮಾಡದಿದ್ದರೆ ಅಧ್ಯಯನವು ವ್ಯರ್ಥವಾಗುತ್ತದೆ. ಎಂಬುದು ಈ ಪ್ರಮಾಣದಿಂದ ತಿಳಿದುಬರುತ್ತದೆ. 



‘ಯದಧೀತಮವಿಜ್ಞಾತಂ ನಿಗದೇನೈವ ಶಬ್ದ್ಯತೇ |

ಅನಗ್ನಾವಿವ ಶುಷ್ಕೈಧೋ ನ ತಜ್ಜ್ವಲತಿ ಕರ್ಹಿಚಿತ್’||



ಕಟ್ಟಿಗೆ ಒಣಗಿದ್ದರೂ ಸಹ ಶಾಂತವಾದ ಅಗ್ನಿ ಅದನ್ನು ಹೇಗೆ ಸುಡುವುದಿಲ್ಲವೋ ಅದರಂತೆ ಅಧ್ಯಯನ ಮಾಡಿ ಶಬ್ದಗಳನ್ನು ಕಂಠಪಾಠಮಾಡಿ ಅದರ ಅರ್ಥವನ್ನು ತಿಳಿಯದೆ,  ಮತ್ತೊಬ್ಬರಿಗೆ ಉಪದೇಶ ಮಾಡಿದರೆ ಅದು ಫಲಿಸುವುದಿಲ್ಲ. ಅಂಥವನಲ್ಲಿ ಯಾವ ಶಕ್ತಿಯೂ  ಇರುವುದಿಲ್ಲ. ಈ ಮಾತಿನಂತೆ ಕೇವಲ ಅಧ್ಯಯನವು ವ್ಯರ್ಥವೆಂದಾಗುತ್ತದೆ. ಆದ್ದರಿಂದ ತಾವು ತಿಳಿದಿದ್ದನ್ನು ಮತ್ತೊಬ್ಬರಿಗೆ ಅವಶ್ಯವಾಗಿ ಉಪದೇಶ ಮಾಡಬೇಕು. ಈ ವಿಷಯದಲ್ಲಿ ನಾರದರು ಅಗ್ರೇಸರರು ಎಂಬುದಾಗಿ ‘ವಾಗ್‌ವಿದಾಂ ವರಮ್’ ಎಂಬ ಪದದಿಂದ  ಹೇಳುತ್ತಿದ್ದಾರೆ. ವಾಕ್ ಎಂಬ ಪದಕ್ಕೆ ವೇದ ಎಂದರ್ಥ. ‘ಅನಾದಿನಿಧನಾ ಹ್ಯೇಷಾ ವಾಗುತ್ಸೃಷ್ಟಾ ಸ್ವಯಂಭುವಾ’ ಎಂಬ ಪ್ರಮಾಣವು ವಾಕ್‌ಶಬ್ದವನ್ನು ವೇದದಲ್ಲಿ ಪ್ರಯೋಗಿಸಿದೆ ಈ ವೇದವನ್ನು ತಿಳಿಸುವರು ವಾಗ್‌ವಿದರು. ಇವರ ಮಧ್ಯದಲ್ಲಿ ಶ್ರೇಷ್ಠರಾದವರು ನಾರದರು. ವಾಗ್‌ವಿದಾಂ ಎಂಬಲ್ಲಿ ಷಷ್ಠೀವಿಭಕ್ತಿಯು ನಿರ್ಧಾರಣಾರ್ಥದಲ್ಲಿ ಇರುತ್ತದೆ.



೨. ಅಥವಾ ವಾಕ್‌ಪದಕ್ಕೆ ವ್ಯಾಕರಣ ಎಂಬರ್ಥವು ಪ್ರಸಿದ್ಧವಾಗಿದೆ. ಉಪಲಕ್ಷಣಯಾ ವೇದದ ಷಡಂಗಗಳನ್ನು ವಿವಕ್ಷಿಸಿದಾಗ ವೇದದಲ್ಲಿ ಮಾತ್ರವಲ್ಲದೆ ಷಡಂಗಗಳನ್ನು ತಿಳಿದವರಲ್ಲೂ ನಾರದರು ಅಗ್ರೇಸರರು ಎಂಬರ್ಥವು ತಿಳಿಯುತ್ತದೆ. ಆದ್ದರಿಂದ ನಾರದರು ವಾಗ್‌ವಿಶಾರದರಾಗಿದ್ದಾರೆ.

‘ಮುನಿಪುಂಗವಮ್’ - ೧. ಮನನಶೀಲರಾದವರಲ್ಲಿ ನಾರದರು ಶ್ರೇಷ್ಠರಾಗಿದ್ದಾರೆ ಎಂದರ್ಥ. ೨. ಮುನಿಶಬ್ದಕ್ಕೆ ಜ್ಞಾನಿಜನರು ಎಂದರ್ಥ. ಅವರಲ್ಲಿ ಶ್ರೇಷ್ಠರಾದವರು ನಾರದರು.



‘ತಪಃಸ್ವಾಧ್ಯಾಯನಿರತಮ್’- ಎಂಬುದರಿಂದ ಶ್ರವಣವನ್ನು, ವಾಗ್‌ವಿದಾಂ ವರಂ ಎಂಬುದರಿಂದ ಮನನವನ್ನು, ಮುನಿಪುಂಗವಮ್ ಎಂಬುದರಿಂದ ನಿದಿಧ್ಯಾಸನವನ್ನು ತಿಳಿಸಿದಂತಾಯಿತು. ಶ್ರವಣ ಮನನ ನಿದಿಧ್ಯಾಸನಗಳಲ್ಲಿ ಸಿದ್ಧಿ ಪಡೆದವರು ನಾರದರು.

‘ನಾರ’ ಎಂಬ ಪದಕ್ಕೆ ಜ್ಞಾನ ಮತ್ತು ಅಜ್ಞಾನ ಎಂಬ ಎರಡೂ ಅರ್ಥವಿದೆ. ಹಾಗಾಗಿ



೧. ನಾರಂ - ಜ್ಞಾನಂ ತದ್ದದಾತೀತಿ ನಾರದಃ.



೨. ನಾರಂ - ‘ಅಜ್ಞಾನಂ ತತ್ಖಂಡಯತೀತಿ ನಾರದಃ’ ಎಂಬ ಎರಡು ನಿಷ್ಪತ್ತಿಯನ್ನೂ ಕಾಣಬಹುದು.

‘ನಾರದಮ್’ - ‘ನರಸಂಬಂಧೀ ನಾರಮ್ = ಅಜ್ಞಾನಂ, ತದ್ಯತಿ ಖಂಡಯತಿ ಇತಿ ನಾರದಃ’ ‘ದೋ ಅವಖಂಡನೇ’ ಎಂಬ ಧಾತುವಿನಂತೆ ದೋ ಎಂಬ ಪದಕ್ಕೆ ನಾಶಮಾಡುವುದು ಎಂದರ್ಥ. ಮನುಷ್ಯರಲ್ಲಿರುವ ಅಜ್ಞಾನಕ್ಕೆ ‘ನಾರ’ ಎಂದು ಹೆಸರು. ಈ ಅಜ್ಞಾನವನ್ನು ಪರಿಹರಿಸುವುದರಿಂದ ‘ನಾರದ’ ಎಂದು ಕರೆಸಿಕೊಂಡರು.



ನಾರದರು ಅಜ್ಞಾನವನ್ನು ಪರಿಹರಿಸುವವರು ಎಂಬ ವಿಷಯವು ನಾರದ ಪುರಾಣದಲ್ಲಿ ಹೀಗೆ ಹೇಳಲ್ಪಟ್ಟಿದೆ.

ಗಾಯನ್ನಾರಾಯಣಕಥಾಂ ಸದಾ ಮಾಯಾಭಯಾಪಹಾಮ್ |

ನಾರದೋ ನಾಶಯನ್ನೇತಿ ನೃಣಾಂ ಅಜ್ಞಾನಜಂ ತಮಃ  ||



ಅಜ್ಞಾನ ಹಾಗೂ ಭಯಗಳನ್ನು ಪರಿಹರಿಸುವ  ನಾರಾಯಣನ ಕಥೆಯನ್ನು ಸದಾಕಾಲದಲ್ಲಿ ನಾರದರು ಹಾಡುತ್ತಾ ಮನುಷ್ಯರ ಅಜ್ಞಾನದಿಂದ ಹುಟ್ಟಿದ ಪಾಪಗಳನ್ನು ನಾಶಮಾಡುತ್ತಾ ‘ನಾರದ’ ಎಂಬ ಹೆಸರನ್ನು ಸಾರ್ಥಕಗೊಳಿಸಿಕೊಂಡರು.



ಇಲ್ಲಿ ಗಮನಿಸಬೇಕಾದ ಅಂಶ -



‘ತಂ ಯಥಾ ಯಥಾ ಉಪಾಸತೇ ತದೇವ ಭವತಿ’ ಎಂಬ ಉಪನಿಷತ್ತಿನ ಮಾತಿನಂತೆ ನಾರದರು ಭಗವಂತನನ್ನು  ಅಜ್ಞಾನನಿವಾರಕ ಭಯನಿವಾರಕ ಎಂದು ಉಪಾಸನೆ ಮಾಡಿದರು. ಆದ್ದರಿಂದ ಅವರಿಗೆ ಮನುಷ್ಯರಲ್ಲಿರುವ ಅಜ್ಞಾನ ಭಯಗಳನ್ನು ನಾಶಮಾಡುವ ಸಾಮರ್ಥ್ಯ ಭಗವಂತನಿಂದ ಬಂದಿತು.

ಅಥವಾ ಮನುಷ್ಯರಿಗೆ ಸಂಬಂಧಪಟ್ಟ ಜ್ಞಾನವು ‘ನಾರ’ ಎಂದು ಕರೆಸಿಕೊಳ್ಳುತ್ತಾರೆ. ಈ ಜ್ಞಾನವನ್ನು ದದಾತಿ = ಕೊಡುವುದರಿಂದ ನಾರದರು ಎಂದು ಕರೆಸಿಕೊಳ್ಳುತ್ತಾರೆ. ಆದ್ದರಿಂದ ನಾರದರು ಎಲ್ಲರಿಗೂ ಗುರುಗಳಾಗಿದ್ದಾರೆ.



೩. ವೇದವ್ಯಾಸರು ಮಹಾಭಾರತದಲ್ಲಿ ಹೀಗೆ ಹೇಳಿದ್ದಾರೆ -

ನರತೀತಿ ನರಃ ಪ್ರೋಕ್ತಃ ಪರಮಾತ್ಮಾ ಸನಾತನಃ |

ಸ ಏವ ನಾರಃ ತಂ ದದಾತೀತ್ಯುಪದಿಶತೀತಿ ನಾರದಸ್ತಮ್ ||



ನರತಿ - ಎಂದರೆ ಸದ್ಗತಿಯನ್ನು ಕೊಡುತ್ತಾನೆ ಎಂದರ್ಥ. ಹಾಗಾಗಿ ಭಗವಂತನಿಗೆ ‘ನರ’ ಎಂದು ಹೆಸರು. ‘ನರ ಏವ ನಾರಃ’,  ಹಾಗಾಗಿ ನಾರಃ - ಎಂದರೆ ಪರಮಾತ್ಮ ಎಂದರ್ಥ ತಂ ದದಾತಿ - ಉಪದಿಶತಿ ಅವನ ಬಗ್ಗೆ ಉಪದೇಶವನ್ನು ಮಾಡುವ ಮೂಲಕ ಅವನನ್ನು ತಿಳಿಸಿಕೊಡುತ್ತಾರೆ. ಹಾಗಾಗಿ ನಾರದ ಎಂದು ನಾರದ ಋಷಿಗಳಿಗೆ ಹೆಸರು.



‘ನರತಿ ಸದ್ಗತಿಂ ಪ್ರಾಪಯತಿ ಇತಿ ನಾರದಃ’ ಸದ್ಗತಿಯನ್ನು ಕೊಡುವವರಾದ್ದರಿಂದ ‘ನಾರದ’ ಎಂದು ಕರೆಸಿಕೊಳ್ಳುತ್ತಾರೆ.



೧. ‘ತಪಸ್ವೀ’ - ಶಿಷ್ಯರಾದ ವಾಲ್ಮೀಕಿಗಳ ಲಕ್ಷಣವನ್ನು ಈ ಶಬ್ದವು ತಿಳಿಸುತ್ತಿದೆ. ‘ತಪಃ ಅಸ್ಯ ಅಸ್ತೀತಿ ತಪಸ್ವೀ’ ಎಂದು ವಿಗ್ರಹ. ‘ಪ್ರಶಸ್ತವಾದ ತಪಸ್ಸುಳ್ಳವರು’ ಎಂಬರ್ಥವನ್ನು ಹೇಳಿದಂತಾಗುತ್ತದೆ.



೨. ಗೌಣವಾದ ಮತ್ತು ಮುಖ್ಯವಾದ ಎಲ್ಲಾ ಬಗೆಯ ತಪಸ್ಸುಳ್ಳವರು ಎಂಬುದು ಮತ್ತೊಂದು ಅರ್ಥ. ‘ಮನಸಶ್ಚೇಂದ್ರಿಯಾಣಶ್ಚ ಏಕಾಗ್ರಮ್ ಪರಮಂ ತಪಃ’ ಎಂಬ ಮಾತಿನಂತೆ ಮನಸ್ಸು ಹಾಗೂ ಇಂದ್ರಿಯಗಳ ಏಕಾಗ್ರತೆಯು ಶ್ರೇಷ್ಠವಾದ ತಪಸ್ಸು. ಕೃಛ್ರ, ಚಾಂದ್ರಾಯಣ, ಏಕಾದಶೀಉಪವಾಸ ಮೊದಲಾದವುಗಳೂ ಮುಖ್ಯವಾದ ತಪಸ್ಸು. ಈ ಎರಡೂ ಬಗೆಯ ತಪಸ್ಸುಳ್ಳವರು ಎಂದರ್ಥ.



‘ವಾಲ್ಮೀಕಿಃ’ - ‘ವಲ್ಮೀಕಸ್ಯ ಅಪತಮ್ ವಾಲ್ಮೀಕಿಃ’ ಎಂದು ವಿಗ್ರಹ. ಹುತ್ತದಿಂದ ಹುಟ್ಟಿರುವ  ಕಾರಣ ಇವರಿಗೆ ವಾಲ್ಮೀಕಿ ಎಂಬ ಹೆಸರು ಬಂದಿದೆ. ವಾಲ್ಮೀಕಿಗಳು ಭೃಗುಋಷಿಗಳ ಮಕ್ಕಳು ಎಂಬುದಾಗಿ ವಿಷ್ಣುಪುರಾಣವು ಹೇಳಿದೆ. ‘ಪುತ್ರೋಭೂತ್ ಭಾರ್ಗವಸ್ತಸ್ಮಾತ್ ವಾಲ್ಮೀಕಿರ್ಯೋಭಿಧೀಯತೇ’ ಎಂದು. ಮತ್ತು ರಾಮಾಯಣದಲ್ಲಿಯೂ ಕೂಡ ‘ಭಾರ್ಗವೇಣೇತಿ  ಸಂಸ್ಕೃತೌ ಭಾರ್ಗವೇಣ ತಪಸ್ವಿನಾ’  ಎಂದು ಭೃಗುವಿನ ಮಗನೆಂದೇ ಕರೆಯಲಾಗಿದೆ. ಮತ್ತೊಂಡು ಕಡೆ ‘ಚಕ್ರೇ ಪ್ರಚೇತಸಃ ಪುತ್ರಸ್ತಂ ಬ್ರಹ್ಮಾಪ್ಯನ್ವಮನ್ಯತೇ’ ಎಂಬುದಾಗಿ ಪ್ರಚೇತಸರ ಮಕ್ಕಳೆಂದು ಹೇಳಲಾಗಿದೆ. ‘ವೇದಃ ಪ್ರಾಚೇತಸಾದಾಸೀತ್’ ಎಂಬ ಮಾತು ಕೂಡ ಇದಕ್ಕೆ ಆಧಾರವಾಗಿದೆ. ಹೀಗಿರುವಾಗ ಹುತ್ತದಿಂದ ಹುಟ್ಟಿದವರು ಎಂದು ಹೇಳುವುದು ಹೇಗೆ? ಈ ಪ್ರಶ್ನೆಗೆ ಉತ್ತರವನ್ನು ಹೀಗೆ ತಿಳಿಯಬೇಕು. ಅಖಂಡವಾದ ತಪಸ್ಸು ಮಾಡುತ್ತಿದ್ದಾಗ ವಾಲ್ಮೀಕಿಗಳ ದೇಹದ ಮೇಲೆ ಹುತ್ತ ಬೆಳೆಯಿತು. ಆಗ ಪ್ರಚೇತಸ ಎಂದು ಕರೆಸಿಕೊಳ್ಳುವ ವರುಣನು ಮಳೆಯನ್ನು ಸುರಿಸಿ ಹುತ್ತದಿಂದ ಮೇಲೆದ್ದು ಬರುವಂತೆ ಮಾಡಿದನು. ಆದ್ದರಿಂದ ಪ್ರಾಚೇತಸರ ಮಕ್ಕಳು ಎಂಬುದು ಹುತ್ತದಿಂದ ಹುಟ್ಟಿದವರು ಎಂಬುದಕ್ಕೆ ವಿರುದ್ಧವಾಗುವುದಿಲ್ಲವೆಂದು ಕೂಡಿಸಬಹುದು. ಮತ್ತು ಭೃಗು ಋಷಿಗಳಿಂದ ಹುಟ್ಟಿರುವ ಕಾರಣ ಭೃಗುಪುತ್ರರಾಗಿದ್ದಾರೆ ಎಂಬುದನ್ನು ಕೂಡಿಸಬಹುದು.



ಹೀಗೆ ‘ವಾಲ್ಮೀಕಿ’ ಎಂಬ ಹೆಸರಿನಿಂದಲೇ ವಾಲ್ಮೀಕಿಗಳಿಗೆ ಶಮದಮಾದಿ- ಗುಣಗಳು ಇದೆ ಎಂದು ತಿಳಿಯುತ್ತದೆ. ಆದ್ದರಿಂದ ರಾಮಾಯಣದ ಉಪದೇಶಕ್ಕೆ ವಾಲ್ಮೀಕಿಮಹರ್ಷಿಗಳು ಅತ್ಯಂತ ಅರ್ಹರಾದವರು ಎಂದು ಸ್ಪಷ್ಟವಾಗುತ್ತದೆ.



‘ಪರಿಪಪ್ರಚ್ಛ’ - ಅತ್ಯಂತ ಶ್ರದ್ಧೆಯಿಂದ ಪ್ರಶ್ನಿಸಿದರು ಎಂದರ್ಥ. ‘ತದ್‌ವಿಜ್ಞಾನಾರ್ಥಂ ಸ ಗುರುಮೇವ ಅಭಿಗಚ್ಛೇತ್’ ಎಂಬ ಮಾತಿನಂತೆ ವಿಧಿಪುರಸ್ಸರವಾಗಿ ನಾರದರನ್ನು ಗುರುತ್ವೇನ ಸ್ವೀಕರಿಸಿ ಪ್ರಶ್ನಿಸಿದರು ಎಂದರ್ಥ.

ಮೂರು ಶ್ಲೋಕಗಳಿಂದ ನಾರದರ ಬಳಿ ವಾಲ್ಮೀಕಿಗಳ ಪ್ರಶ್ನೆ


***

No comments:

Post a Comment

ಬಾಲ ಕಾಂಡ ಸರ್ಗ 1 ಸ್ಲೋಕ 5&6

ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಲು ತಾವೊಬ್ಬರೇ ಸಮರ್ಥರು ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ   | ಮಹರ್ಷೇ ತ್ವಂ ಸಮರ್ಥೋ ಽ ಸಿ ಜ್ಞಾತ...