ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಲು ತಾವೊಬ್ಬರೇ ಸಮರ್ಥರು
ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ |
ಮಹರ್ಷೇ ತ್ವಂ ಸಮರ್ಥೋಽಸಿ ಜ್ಞಾತುಮೇವಂವಿಧಂ ನರಮ್ ||೫||
ತಾತ್ಪರ್ಯ - ಓ ಋಷಿಶ್ರೇಷ್ಠರಾದ ನಾರದರೆ ! ಇಂಥ ಗುಣಶಾಲಿಯಾದ ವ್ಯಕ್ತಿಯನ್ನು ತಿಳಿದುಕೊಳ್ಳಲು ನನಗೆ ಕುತೂಹಲ ಹೆಚ್ಚಾಗುತ್ತಿದೆ. ಅಂಥ ವ್ಯಕ್ತಿಯನ್ನು ಸಂಪೂರ್ಣವಾಗಿ ತಾವು ತಿಳಿಯಲು ಸಮರ್ಥರಿದ್ದೀರಿ. ಕೃಪೆಯಿಂದ ನನಗೆ ಅದನ್ನು ತಿಳಿಸಿರಿ.
ವ್ಯಾಖ್ಯಾನ - ಹೇ ಮಹರ್ಷೇ = ಜ್ಞಾನಿಶ್ರೇಷ್ಠರಾದ ನಾರದರೇ ತ್ವಂ = ತಾವು ಏವಂ ವಿಧಂ ನರಮ್ = ಇಂಥ ಗುಣಗಣಿಯಾದ ಶ್ರೇಷ್ಠಪುರುಷನನ್ನು ಜ್ಞಾತುಂ = ತಿಳಿಯಲು ಸಮರ್ಥೋಽಸಿ = ಸಮರ್ಥರಾಗಿರುವಿರಿ ಅಹಂ = ನಾನು ಏತತ್ = ಈ ದಿವ್ಯ ಪುರುಷನ ಗುಣಗಳ ಮಹಿಮೆಯನ್ನು ಶ್ರೋತುಂ = ಕೇಳಲು ಇಚ್ಚಾಮಿ = ಇಚ್ಛಿಸುತ್ತೇನೆ. ಹಿ = ಏಕೆಂದರೆ ಮೇ = ನನಗೆ ಪರಂ ಕೌತೂಹಲಂ = ಬಹಳವಾದ ಕೂತೂಹಲವಿದೆ. (ಪೂರ್ವಾರ್ಧದಲ್ಲಿ ಕಾವ್ಯಾಲಂಕಾರವನ್ನು ಉತ್ತರಾರ್ಧದಲ್ಲಿ ಕಾವ್ಯಲಿಂಗಾಲಂಕಾರವನ್ನು ತಿಳಿಯಬೇಕು.)
ವಿಶೇಷ ವಿಚಾರ - ಗುರುಗಳೇ ನನ್ನ ಹೃದಯದಲ್ಲಿ ಈ ಜಿಜ್ಞಾಸೆ ಬಹುಕಾಲದಿಂದ ಅಡಗಿದೆ. ಉತ್ತಮಜ್ಞಾನಿಗಳ ಬಳಿ ಇದಕ್ಕೆ ಉತ್ತರವನ್ನು ತಿಳಿದುಕೊಳ್ಳಲು ನಿರಂತರ ಹಾತೊರೆಯುತ್ತಿದೆ. ಇಂಥ ಸಂದರ್ಭದಲ್ಲಿ ತಾವಿಲ್ಲಿಗೆ ಆಗಮಿಸಿದ್ದು ನನ್ನ ಸೌಭಾಗ್ಯ. ತಾವು ಚತುರ್ಮುಖಬ್ರಹ್ಮನಿಂದ ಇದೆಲ್ಲವನ್ನೂ ಕೂಡ ಯಥಾರ್ಥವಾಗಿ ತಿಳಿದಿರುವಿರಿ. ಆದ್ದರಿಂದ ಈ ರೀತಿಯಾದ ಗುಣಗಳುಳ್ಳ ದಿವ್ಯಪುರುಷನನ್ನು ನನಗೆ ತಿಳಿಸಿಕೊಡಿರಿ. ಅಂಥ ಪುರುಷನನ್ನು ತಿಳಿದುಕೊಂಡು ನನ್ನ ಜೀವನವನ್ನು ಸಾರ್ಥಕವನ್ನಾಗಿ ಭಾವಿಸುತ್ತೇನೆ. ತಾವು ತ್ರಿಕಾಲಜ್ಞಾನಿಗಳಾಗಿರುವಿರಿ. ತಾವೊಬ್ಬರು ಬಿಟ್ಟರೆ ಇಂಥ ದಿವ್ಯಪುರುಷನನ್ನು ಮತ್ತೊಬ್ಬರು ತಿಳಿಯಲಾರರು. ಅಂಥ ಪುರುಷನನ್ನು ನನಗೆ ತಿಳಿಸಿ ಉತ್ತರಿಸಿರಿ.
ಶಿಷ್ಯರಾದ ವಾಲ್ಮೀಕಿಗಳಿಗೆ ಗುರು ನಾರದರಿಂದ ಉಪದೇಶ ಪ್ರಾರಂಭವಾಯಿತು
ಶ್ರುತ್ವಾ ಚೈತತ್ ತ್ರಿಲೋಕಜ್ಞಾ ವಾಲ್ಮೀಕೇರ್ನಾರದೋ ವಚಃ |
ಶ್ರೂಯತಾಮಿತಿ ಚಾಮಂತ್ರ್ಯ ಪ್ರಕೃಷ್ಟೋ ವಾಕ್ಯಮಬ್ರವೀತ್ ||೬||
ತಾತ್ಪರ್ಯ - ಮೂರು ಲೋಕದ ಜ್ಞಾನವನ್ನು ಪಡೆದಿರುವ ನಾರದರಿಗೆ ವಾಲ್ಮೀಕಿ ಋಷಿಗಳ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು. ವಾಲ್ಮೀಕಿಗಳ ಪ್ರಶ್ನೆಯನ್ನು ಪ್ರಶಂಸೆಮಾಡಿ ಉತ್ತರಿಸುತ್ತೇನೆ ಕೇಳು ಎಂದು ವಾಲ್ಮೀಕಿಗಳನ್ನು ಅಭಿಮುಖ ಮಾಡಿ ಉತ್ತರಿಸಲು ಪ್ರಾರಂಭಿಸಿದರು.
ವ್ಯಾಖ್ಯಾನ - ತ್ರಿಲೋಕಜ್ಞಃ = ಮೂರುಲೋಕಗಳನ್ನು ಬಲ್ಲ, ನಾರದಃ = ನಾರದಮಹರ್ಷಿಗಳು, ವಾಲ್ಮೀಕೇಃ = ವಾಲ್ಮೀಕಿಗಳ, ಏತತ್ = ಈ ಪ್ರಶ್ನೆಯನ್ನು, ಚ = ಮನಸ್ಸಿನ ಆಂತರ್ಯವನ್ನು, ಶ್ರುತ್ವಾ = ಕೇಳಿ ತಿಳಿದು, ಪ್ರಹೃಷ್ಟಃ = ಬಹಳ ಸಂತೋಷಪಟ್ಟವರಾಗಿ, ವಚಃ ಶ್ರೂಯತಾಮ್ = ನನ್ನ ಮಾತುಗಳನ್ನು ಕೇಳಿರಿ, ಇತಿ = ಹೀಗೆ, ಆಮಂತ್ರ್ಯ= ಅಭಿಮುಖರನ್ನಾಗಿ ಮಾಡಿ, ವಾಕ್ಯಮ್ = ಉತ್ತರ ನೀಡುವ ಮಾತುಗಳನ್ನು, ಅಬ್ರವೀತ್ = ಸ್ಪಷ್ಟವಾಗಿ ಹೇಳಿದರು.
ವಿಶೇಷ ವಿಚಾರ - ‘ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್’- ಎಂಬ ಮಾತಿನಂತೆ ಜ್ಞಾನದ ಪ್ರಾಪ್ತಿಗಾಗಿ ಗುರುಗಳ ಬಳಿ ಶಿಷ್ಯನು ತೆರಳಬೇಕು. ಎಂಬುದು ಆಥರ್ವಣೋಪನಿಷತ್ತಿನಲ್ಲಿ ಬರುವ ಆದೇಶ. ಆದರೆ ಇಲ್ಲಿ ಗುರುಗಳಾದ ನಾರದರೇ ಶಿಷ್ಯರಾದ ವಾಲ್ಮೀಕಿಗಳ ಬಳಿ ಧಾವಿಸಿಬಂದಿದ್ದಾರೆ. ಶಿಷ್ಯನಿಗೆ ಜ್ಞಾನೋಪದೇಶದ ಕಾಲವು ಪಕ್ವವಾದಾಗ ಸ್ವತಃ ಗುರುಗಳೇ ಬಂದು ಉಪದೇಶಿಸಿ ಪ್ರೇರಣೆ ಮಾಡುತ್ತಾರೆಂಬ ತತ್ವವನ್ನು ಇದರಿಂದ ತಿಳಿಯಬೇಕು.
‘ನಾಸಂವತ್ಸರವಾಸಿನೇ ಪ್ರಬ್ರೂಯಾತ್’ - ಒಂದು ವರ್ಷಗಳ ಕಾಲ ಗರುಗಳ ಸೇವೆ ಮಾಡದವನಿಗೆ ಏನನ್ನೂ ಉಪದೇಶ ಮಾಡಬಾರದು ಎಂಬ ವಾಕ್ಯವಿರುವುದರಿಂದ ವಾಲ್ಮೀಕಿಗಳಿಗೆ ನಾರದರು ಕೂಡಲೇ ಹೇಗೆ ಉಪದೇಶಿಸಿದರು ? ಎಂಬ ಪ್ರಶ್ನೆ ಬರುತ್ತದೆ. ಆದರೆ ಈ ನಿಯಮವು ಜ್ಯೇಷ್ಠ ಪುತ್ರನನ್ನು ಬಿಟ್ಟು ಬೇರೆ ಶಿಷ್ಯಂದಿರ ವಿಷಯದಲ್ಲಿ ಮಾತ್ರ ಅನ್ವಯವಾಗುತ್ತದೆ. ಜ್ಯೇಷ್ಠಪುತ್ರನಿಗೆ ಒಂದು ವರ್ಷಗಳ ಕಾಲ ಸೇವೆ ಮಾಡಬೇಕೆಂಬ ನಿಯಮವಿಲ್ಲ. ನಾರದರಿಗೆ ವಾಲ್ಮೀಕಿಗಳು ಜ್ಯೇಷ್ಠಪುತ್ರರೇ ಆಗಿದ್ದಾರೆ. ನಾರದರಿಗೆ ಭೃಗುಋಷಿಗಳು ಸಹೋದರರಾಗಿದ್ದಾರೆ ಭೃಗುಋಷಿಗಳ ಪುತ್ರ ವಾಲ್ಮೀಕಿಗಳಾದ್ದರಿಂದ ತಮಗೂ ಕೂಡ ವಾಲ್ಮೀಕಿಗಳು ಜ್ಯೇಷ್ಠಪುತ್ರರೇ ಆಗುತ್ತಾರೆ. ಆದ್ದರಿಂದ ಶುಶ್ರೂಷೆಯಿಲ್ಲದಿದ್ದರೂ ಪ್ರೀತಿಯಿಂದ ಉಪದೇಶ ಮಾಡಬಹುದು.
‘ತ್ರಿಲೋಕಜ್ಞಃ’ - ಭೂಲೋಕ ಭುವರ್ಲೋಕ ಸುವರ್ಲೋಕ ಈ ಮೂರನ್ನೂ ಸಹ ಸಂಪೂರ್ಣವಾಗಿ ಅರಿತವರು ಅಥವಾ ಬದ್ಧಲೋಕ ನಿತ್ಯ ಅಮುಕ್ತಲೋಕ ನಿತ್ಯಮುಕ್ತಲೋಕ ಮೂರನ್ನು ಕೂಡ ಅರಿತವರು.
‘ಶ್ರುತ್ವಾ ಚ’ - ವಾಲ್ಮೀಕಿಗಳ ಮಾತನ್ನು ಕೇಳಿ ಎಂದರ್ಥ. ಚ ಶಬ್ದದಿಂದ ಅವರು ಹೇಳದೆ ಮನಸ್ಸಿನಲ್ಲೇ ಉಳಿದ ಪ್ರಶ್ನೆಯ ಅಭಿಪ್ರಾಯವನ್ನೆಲ್ಲಾ ಸಂಪೂರ್ಣವಾಗಿ ತಿಳಿದು ಎಂಬುದನ್ನು ವಿವಕ್ಷಿಸಬೇಕು.
‘ಪ್ರಹೃಷ್ಟಃ’ - ಬ್ರಹ್ಮದೇವರು ನಾರದರಿಗೆ ಶತಕೋಟಿ ವಿಸ್ತಾರವಾದ ರಾಮಾಯಣವನ್ನು ಭೂಲೋಕದಲ್ಲಿ ಪ್ರಚಾರ ಮಾಡಲು ಆದೇಶ ಮಾಡಿದ್ದರು. ಅದನ್ನು ವಾಲ್ಮೀಕಿಗಳಿಗೆ ಉಪದೇಶಿಸಲು ನಾರದರೂ ಆಗಮಿಸಿದ್ದರು. ಅದರ ಬಗ್ಗೆಯೇ ವಾಲ್ಮೀಕಿಗಳು ಪ್ರಶ್ನೆ ಮಾಡಿದ್ದರಿಂದ ನಾರದರಿಗೆ ಬಹಳ ಸಂತೋಷವಾಯಿತು.