Thursday, May 10, 2018

ಬಾಲ ಕಾಂಡ ಸರ್ಗ ೧ ಸ್ಲೋಕ ೩ & ೪

ಚಾರಿತ್ರೇಣ ಕೋ ಯುಕ್ತಃ ಸರ್ವಭೂತೇಷು ಕೋ ಹಿತಃ  |
ವಿದ್ವಾನ್ ಕಃ ಕಃ ಸಮರ್ಥಶ್ಚ ಕಶ್ಬೈಕಪ್ರಿಯದರ್ಶನಃ ||||

ತಾತ್ಪರ್ಯ - ಶ್ರೇಷ್ಠವಾದ ಕುಲಾಚಾರವುಳ್ಳವನು ಯಾರು? ಎಲ್ಲಾ ಬಗೆಯ ಪ್ರಾಣಿಗಳ ಮಧ್ಯದಲ್ಲಿ  ಯಾವ ಪುರುಷನು ಎಲ್ಲಾ ರೀತಿಯಲ್ಲಿ ಹಿತಕರನಾಗಿದ್ದಾನೆ. ಆತ್ಮತತ್ವ ಹಾಗೂ ಅನಾತ್ಮತತ್ವವನ್ನು ಪೂರ್ಣವಾಗಿ ಬಲ್ಲವನು ಯಾರು? ಐಹಿಕವಾಗಿ ಮತ್ತು ಆಮುಷ್ಮಿಕವಾಗಿ ಎಲ್ಲಾ ರೀತಿಯಲ್ಲೂ ಹಿತವನ್ನು ಉಂಟುಮಾಡುವವನು ಯಾರು

ವ್ಯಾಖ್ಯಾನ - ಚಾರಿತ್ರೇಣ = ಶ್ರೇಷ್ಠವಾದ ಆಚಾರದಿಂದ, ಯುಕ್ತಃ = ಕೂಡಿದವನು, ಕಃ = ಯಾರು? ಸರ್ವಭೂತೇಷು = ಎಲ್ಲಾ ಬಗೆಯ ಪ್ರಾಣಿಗಳ ಮಧ್ಯದಲ್ಲಿ , ಕಃ = ಯಾವ ಪುರುಷನು, ಹಿತಃ = ಎಲ್ಲಾ ರೀತಿಯಲ್ಲಿ ಹಿತಕರನಾಗಿದ್ದಾನೆ, ಕಃ = ಯಾರು, ವಿದ್ವಾನ್ = ಆತ್ಮ ಹಾಗೂ ಅನಾತ್ಮತತ್ವವನ್ನು ಪೂರ್ಣವಾಗಿ ಬಲ್ಲವನು, ಸಮರ್ಥಶ್ಚ = ಯಾರಿಂದಲೂ ಮಾಡಲಾಗದ ಕೆಲಸವನ್ನು ಮಾಡುವುದರಲ್ಲಿ ಸಮರ್ಥನು, ಕಃ = ಯಾರು?,  ಏಕಪ್ರಿಯದರ್ಶನಃ = ಯಾವಾಗ ನೋಡಿದರೂ ಪ್ರಿಯನಾಗಿಯೇ ಕಾಣುವವನು, ಕಃ = ಯಾರು ?

ವಿಶೇಷವಿಚಾರ - ಒಬ್ಬ ವ್ಯಕ್ತಿ ಶ್ರೇಷ್ಠನಾಗಿರಬೇಕಾದರೆ ಅವನಲ್ಲಿರ ಬೇಕಾದ ಎಲ್ಲ ಗುಣಗಳನ್ನು ಸಂಗ್ರಹಿಸಿ, ಪ್ರಶ್ನಿಸುತ್ತಿದ್ದಾರೆ. ಕುಲಸಂಪ್ರದಾಯದಲ್ಲಿ ಬಂದ ಎಲ್ಲಾ ಬಗೆಯ ಆಚಾರಗಳನ್ನು ಪಾಲನೆ ಮಾಡುತ್ತಿರಬೇಕು. ಶುದ್ಧವಾದ ಚಾರಿತ್ರ್ಯವನ್ನು ಅಜೀವನ ಹೊಂದಿರಬೇಕು. ಎಲ್ಲ ಪ್ರಾಣಿಗಳಲ್ಲಿ ದಯೆವುಳ್ಳವನಾಗಿರಬೇಕು. ಅಪರಾಧಿಗಳಲ್ಲಿಯೂ ದ್ವೇಷಭಾವವನ್ನು ಹೊಂದಿರಬಾರದು. ಶತ್ರುಗಳಿಗೂ ಅಹಿತವನ್ನು ಬಯಸಬಾರದು. ಪ್ರಾಣಿಗಳ ಬಗ್ಗೆ ಅನುಕಂಪ ಹೊಂದಿರಬೇಕು. ಮತ್ತೊಬ್ಬರಿಗೆ ಹಿತವನ್ನೇ ಬಯಸಬೇಕು. ಎಲ್ಲ ಶಾಸ್ತ್ರಗಳನ್ನು ತಿಳಿದಿರಬೇಕು. ಆತ್ಮತತ್ವ, ಅನಾತ್ಮತತ್ವಗಳ ಬಗ್ಗೆ ಯಥಾರ್ಥಜ್ಞಾನವಿರಬೇಕು. ಎಲ್ಲ ಕಾರ್ಯಗಳನ್ನು ನಿಭಾಯಿಸುವುದರಲ್ಲಿ ಸಮರ್ಥನಾಗಿರಬೇಕು. ಲೌಕಿಕ ವ್ಯವಹಾರದಲ್ಲಿ ಪ್ರಜಾರಂಜನಾದಿ ಕಾರ್ಯಗಳಲ್ಲಿ ಚಾತುರ್ಯವನ್ನು ಹೊಂದಿರಬೇಕು. ಯಾವಾಗಲೂ ನೋಡುವವರಿಗೆ ನೂತನವಾಗಿ ಕಾಣಿಸುವ ರೂಪವನ್ನು ಹೊಂದಿರಬೇಕು. ಮನ್ಮಥನ ಸೌಂದರ್ಯಕ್ಕಿಂತ ಹೆಚ್ಚಿನ ಸೌಂದರ್ಯವನ್ನು ಹೊಂದಿರಬೇಕು. ಇಂಥವನೇ ಭೂಲೋಕದಲ್ಲಿ ಶ್ರೇಷ್ಠನೆಂದು ಕರೆಸಿಕೊಳ್ಳುತ್ತಾನೆ. ಇಂಥವನು ಈಗ ಯಾರಿದ್ದಾರೆ ? ಎಂಬುದಾಗಿ ನಾರದರ ಬಳಿ ವಾಲ್ಮೀಕಿಗಳು ಪ್ರಶ್ನಿಸುತ್ತಿದ್ದಾರೆ. ಆತ್ಮ ಆತ್ಮತತ್ವ ಹಾಗೂ ಅನಾತ್ಮತತ್ವ ಎರಡನ್ನೂ ಪೂರ್ಣವಾಗಿ ತಿಳಿದವನು ವಿದ್ವಾನ್ ಎಂದು ಕರೆಸಿಕೊಳ್ಳುತ್ತಾನೆ

ಕಃ ಸಮರ್ಥಶ್ಚ’ - ಯಾರಿಂದಲೂ ಮಾಡಲು ಸಾಧ್ಯವಾಗದ ಕೆಲಸವನ್ನು ಮಾಡುವವನು ಸಮರ್ಥ ಎಂದು ಕರೆಯಲ್ಪಡುತ್ತಾರೆ. ‘ಅಘಟಿತಘವನಎಂದು ಇದರ ಅಭಿಪ್ರಾಯ.

ಕಶ್ಬೈಕಪ್ರಿಯದರ್ಶನಃ’ - ಇವನಂತೆ ಲೋಕದಲ್ಲಿ ಬೇರೆ ಯಾರೂ ಸಹ ಪ್ರಿಯವಾದ ದರ್ಶನವುಳ್ಳವರಲ್ಲ. ಒಬ್ಬ ವ್ಯಕ್ತಿಯನ್ನು ನೋಡಿದಾಗ  ಒಮ್ಮೆ ಪ್ರಿಯನಾಗಿ ಕಾಣಿಸುತ್ತಾನೆ. ಮತ್ತೊಮ್ಮೆ ಅಪ್ರಿಯನಾಗಿ ಕಾಣಿಸುತ್ತಾನೆ. ಅಂತಹವನನ್ನು ನೋಡಿದಾಗ ಕೆಲವೊಮ್ಮೆ ಸುಖವಾಗುತ್ತದೆ. ಕೆಲವೊಮ್ಮೆ ದುಃಖವಾಗುತ್ತದೆ. ಆದರೆ ಇವನು ಮಾತ್ರ ಹಾಗಲ್ಲ. ‘ಕ್ಷಣೇ ಕ್ಷಣೇ ಯನ್ನವತಾಮುಪೈತಿ ತದೇವ ರೂಪಂ ರಮಣೀಯತಾಯಾಃಪ್ರತಿಕ್ಷಣದಲ್ಲಿಯೂ ಹೊಸಹೊಸ ಸ್ವರೂಪವು ಕಾಣಿಸಿದರೆ ಅದನ್ನು ರಮಣೀಯ ಎಂದು ಕರೆಯುತ್ತಾರೆ. ಇಂಥ ರಮಣೀಯನಾದವನು ಯಾರು? ಎಂದು ಅಭಿಪ್ರಾಯ
ದೇವದಾನವರು ಯಾರಿಗೆ ಹೆದರುತ್ತಾರೆ ?

ಆತ್ಮವಾನ್ ಕೋ ಜಿತಕ್ರೋಧೋ ದ್ಯುತಿಮಾನ್ ಕೋನಸೂಯಕಃ  |
ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ                ||||

ತಾತ್ಪರ್ಯ - ಎಲ್ಲಾ ಇಂದ್ರಿಯಗಳನ್ನು  ತನ್ನ ವಶದಲ್ಲಿ ಇಟ್ಟು ಕೊಂಡಿರುವವನು ಯಾರು? ಕ್ರೋಧವನ್ನೂ ಕೂಡ ತನ್ನ ಅಧೀನದಲ್ಲಿ ಇಟ್ಟುಕೊಂಡಿರುವವನು ಯಾರು? ಸಮಸ್ತಲೋಕವೇ ನೋಡಿ ಮೆಚ್ಚುವಂಥ ದೇಹಕಾಂತಿವುಳ್ಳವನು ಯಾರು? ಮತ್ತೊಬ್ಬರಲ್ಲಿ ಇರುವ ಗುಣವನ್ನು ನೋಡಿ ಅಸೂಯೆ ಪಡದವನು ಯಾರು? ಯಾರಿಗೆ ದುಷ್ಟವಿಚಾರದಲ್ಲಿ ಸಿಟ್ಟು ಬಂದಾಗ ಅಸುರರಷ್ಟೇ ಅಲ್ಲ ದೇವತೆಗಳೂ ಕೂಡ ಹೆದರುತ್ತಾರೋ ಅಂಥವನು ಯಾರು ?

ವ್ಯಾಖ್ಯಾನ - ಆತ್ಮವಾನ್ = . ಅಪ್ರಗಮ್ಯವಾದ ಧೈರ್ಯವುಳ್ಳವನು, ಕಃ = ಯಾರು? . ಇಂದ್ರಿಯಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿರುವ ವ್ಯಕ್ತಿಯು ಯಾರು ? ಜಿತಕ್ರೋಧಃ = ಅರಿಷಡ್ವರ್ಗಗಳನ್ನು ಗೆದ್ದಿರುವವನು, ಕಃ = ಯಾರು ?, ದ್ಯುತಿಮಾನ್ = ಎಲ್ಲರಿಗೂ ನೋಡಬೇಕೆಂಬ ಆಸೆಯನ್ನು ಹುಟ್ಟಿಸುವ ದಿವ್ಯತೇಜಸ್ಸಿನಿಂದ ಕೂಡಿದವನು, ಕಃ = ಯಾರು? ಅನಸೂಯಕಃ = ಗುಣಗಳಲ್ಲಿ ದ್ವೇಷವನ್ನು ಕಾಣದವನು ಯಾರು? ಅಥವಾ ಮತ್ತೊಬ್ಬರ ಐಶ್ವರ್ಯೋನ್ನತಿಯನ್ನು ಕಂಡು ಸಂತೋಷ ಪಡುವವನು, ಕಃ = ಯಾರು? ಕಸ್ಯ= ಯಾವ ವ್ಯಕ್ತಿಯು, ಸಂಯುಗೇ = ಯುದ್ಧಕಾಲದಲ್ಲಿ, ಜಾತರೋಷಸ್ಯ = ದುಷ್ಟವಿಚಾರದಲ್ಲಿ ಕುಪಿತನಾದಾಗದೇವಾಶ್ಚ = ಅಸುರರು ಹಾಗೂ ದೇವತೆಗಳು, ಬಿಭ್ಯತಿ = ಹೆದರುತ್ತಾರೋ?, ಅಂಥ ವ್ಯಕ್ತಿಯು, ಕಃ = ಯಾರು?
ವಿಶೇಷ ವಿಚಾರ - ಆತ್ಮಶಬ್ದಕ್ಕೆ ದೇಹ ಹಾಗೂ ಇಂದ್ರಿಯಗಳು ಎಂದರ್ಥ. ಇವುಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿರುವವನು ಯಾರು? ಅಥವಾ ಆತ್ಮಾ ಜೀವೇ ಧೃತೌ ದೇಹೇ ಸ್ವಭಾವೇ ಪರಮಾತ್ಮನಿಎಂಬ ಕೋಶದಂತೆ ಆತ್ಮವಾನ್ ಎಂದರೆ ಧೈರ್ಯವುಳ್ಳವನು ಎಂದರ್ಥ. ಎಂದೂ ಧೃತಿಗೆಡೆದವನು  ಯಾರು? ಎಂದಭಿಪ್ರಾಯ.

ಜಿತಕ್ರೋಧಃ’ - ಕೋಪವನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡವನು ಜಿತಕ್ರೋಧ ಎಂದು ಕರೆಸಿಕೊಳ್ಳುತ್ತಾನೆ. ಅಪರಾಧಿಗಳ ವಿಷಯದಲ್ಲಿಯೂ ಕೂಡ ದ್ವೇಷಭಾವವನ್ನು ತಾಳದೆ ತಪ್ಪಿಗೆ ಶಿಕ್ಷೆಕೊಡುವ ಬುದ್ಧಿಯುಳ್ಳವನು ಜಿತಕ್ರೋಧನಾಗುತ್ತಾನೆ.

ದ್ಯುತಿಮಾನ್ ಕಃದೇಹದಿಂದ ಹಾಗೂ ಮನಸ್ಸಿನಿಂದ ಶುಭ್ರವಾದ ಕಾಂತಿಯುಳ್ಳವನು ಯಾರು ಸಕಲಲೋಕವೂ ಕೂಡ ಯಾರ ದೇಹಕಾಂತಿಯನ್ನು ನೋಡಿ ಚಕಿತವಾಗುತ್ತದೆಯೋ ಅಂಥವನು ದ್ಯುತಿಮಾನ್ ಎಂದು ಕರೆಸಿಕೊಳ್ಳುತ್ತಾನೆ.

ಕಃ ಅನಸೂಯಕಃ ಗುಣವುಳ್ಳವನಲ್ಲಿ ದ್ವೇಷವನ್ನು ಮಾಡಿದರೆ ಅಸೂಯೆ ಎನ್ನುತ್ತಾರೆ. ಮತ್ತೊಬ್ಬರಲ್ಲಿರುವ ವಿದ್ಯೆ ಐಶ್ಚರ್ಯ ತಪಸ್ಸು ಮೊದಲಾದ ಔನ್ನತ್ಯಕ್ಕೆ ಪೂರಕವಾದ ಗುಣಗಳನ್ನು ನೋಡಿ ಅದರಲ್ಲಿ ದೋಷವನ್ನು  ಹುಡುಕಿ ನಿಂದಿಸುವಿಕೆಯು ಅಸೂಯೆ ಎಂದು ಕರೆಸಿಕೊಳ್ಳುತ್ತದೆ. ಇಂಥ ದೋಷದಿಂದ ಸಂಪೂರ್ಣವಾಗಿ ರಹಿತನಾದವನು ಯಾರು ಎಂದು ಇದರ ಅಭಿಪ್ರಾಯ.

ಕಸ್ಯ ಬಿಭ್ಯತಿ ದೇವಾಶ್ಚ ಜಾತದೋಷಸ್ಯ ಸಂಯುಗೇ’ - ಕಸ್ಯ=ಯಾವ ವ್ಯಕ್ತಿಯು ಸಂಯುಗೇ = ಯುದ್ಧಕಾಲದಲ್ಲಿ ಜಾತದೋಷಸ್ಯ = ದುಷ್ಟವಿಚಾರದಲ್ಲಿ ಕುಪಿತನಾದಾಗ ದೇವಾಶ್ಚ = ಅಸುರರು ಹಾಗೂ ದೇವತೆಗಳು ಬಿಭ್ಯತಿ = ಹೆದರುವರು?

ಭೀತ್ರಾರ್ಥಾನಾಮ್ ಭಯಹೇತುಃಎಂಬ ಸೂತ್ರದಿಂದ ಕಿಮ್ ಶಬ್ದದ ಮೇಲೆ ಪಂಚಮಿವಿಭಕ್ತಿಯು ಪ್ರಾಪ್ತವಾಗಿ ಕಸ್ಯ ಎಂದಾಗಿದೆ. ಆದ್ದರಿಂದ ಇಲ್ಲಿ ಮಾತ್ರ ಕಃ ಎಂದು ಕಸ್ಯ ಎಂದು ಪ್ರಯೋಗಿಸಿದ್ದಾರೆ. ಮೂರು ಶ್ಲೋಕಗಳಲ್ಲಿ ಅತ್ಯಂತ ಸಮೃದ್ಧವಾದ ವಸ್ತುವನ್ನು ವರ್ಣನೆ ಮಾಡಿರುವುದರಿಂದ ಉದಾತ್ತಾಲಂಕಾರವನ್ನು ತಿಳಿಯಬೇಕು.


No comments:

Post a Comment

ಬಾಲ ಕಾಂಡ ಸರ್ಗ 1 ಸ್ಲೋಕ 5&6

ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಲು ತಾವೊಬ್ಬರೇ ಸಮರ್ಥರು ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ   | ಮಹರ್ಷೇ ತ್ವಂ ಸಮರ್ಥೋ ಽ ಸಿ ಜ್ಞಾತ...