Tuesday, May 8, 2018

ಬಾಲ ಕಾಂಡ - ಸರ್ಗ 1 - ಶ್ಲೋಕ ೨


ಕೋನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ  ವೀರ್ಯವಾನ್ |
ಧರ್ಮಜ್ಞಶ್ಚ  ಕೃತಜ್ಞಶ್ಚ  ಸತ್ಯವಾಕ್ಯೋ ದೃಢವ್ರತಃ                ||||

ತಾತ್ಪರ್ಯ - ಲೋಕದಲ್ಲಿ ಪ್ರಕೃತ ಶ್ರೇಷ್ಠರು ಯಾರು ? ಎಲ್ಲಾ ಬಗೆಯ ಕಲ್ಯಾಣಗುಣಗಳುಳ್ಳವನು ಯಾರು ? ದಿವ್ಯವಾದ ಶಸ್ತ್ರಾಸ್ತ್ರಗಳನ್ನು ತಿಳಿದು ಶತ್ರುಗಳನ್ನು ಸದೆಬಡಿಯಬಲ್ಲ ವೀರ ಯಾರು ? ಧರ್ಮವನ್ನು ಪೂರ್ಣವಾಗಿ ಅರಿತವನು ಯಾರು? ಉಪಕಾರ ಸ್ಮರಣೆ ಉಳ್ಳವನು, ತತ್ವವಾದಿಯೂ ಆಪತ್ಕಾಲದಲ್ಲಿಯೂ ಸತ್ಯವನ್ನು ಕಾಪಾಡುವವನು ಯಾರು ?

ವ್ಯಾಖ್ಯಾನ - ಅಸ್ಮಿನ್ ಲೋಕೇ = . ಭೂಲೋಕದಲ್ಲಿ ಸಾಂಪ್ರತಂ = ಈಗಿನ ಕಾಲದಲ್ಲಿ, ಗುಣವಾನ್ = ಎಲ್ಲಾ ಬಗೆಯ ಕಲ್ಯಾಣಗುಣಗಳಿಂದ ಕೂಡಿರುವ ವ್ಯಕ್ತಿಯು, . ದೃಷ್ಟವ್ಯತಿರಿಕ್ತವಾದ ಗುಣಗಳಿಂದ  ಕೂಡಿರುವವನು, . ಸರ್ವೋತ್ತಮವಾದ ಗುಣಗಳಿಂದ ಕೂಡಿದವನು, ಕಃ = ಯಾರು? ವೀರ್ಯವಾನ್ = . ದಿವ್ಯವಾದ ಶಸ್ತ್ರಾಸ್ತ್ರಗಳನ್ನು ಅರಿತು ಶತ್ರುಗಳನ್ನು ನಾಶಮಾಡುವ ವೀರ್ಯವುಳ್ಳವನು, . ವಿಕಾರ ಹೇತುವಾದ ಕೆಲಸಗಳಿದ್ದರೂ ವಿಕಾರವನ್ನು ಹೊಂದದವನು. ಕಃ = ಯಾರು?, . ತಾನು ಹಡೆಯಲ್ಪಡದಿದ್ದರೂ ಶತ್ರುಗಳನ್ನು ಜಯಿಸುವ ಸಾರ್ಮಥ್ಯವುಳ್ಳವನು ಯಾರು?, . ದಿವ್ಯವಾದ ಅಸ್ತ್ರಬಲದಿಂದ ಶತ್ರುಗಳನ್ನು ಹಿಮ್ಮೆಟ್ಟಿಸುವ ಶಕ್ತಿಯುಳ್ಳವನು ಯಾರು ? ಧರ್ಮಜ್ಞಶ್ಚ = ಶ್ರುತಿಸ್ಮೃತಿಗಳಲ್ಲಿ ಹೇಳಿದಂತೆ ಎಲ್ಲಾ ಬಗೆಯ ಧರ್ಮಗಳ ರಹಸ್ಯವನ್ನು ಅರಿತವನು, ಸಾಮಾನ್ಯಧರ್ಮ, ವಿಶೇಷಧರ್ಮಗಳನ್ನು ತಿಳಿದವನು, ಕಃ = ಯಾರು? ಕೃತಜ್ಞಶ್ಚ = ತನಗೆ ಮಾಡಿದ ಅನೇಕ ಅಪಕಾರಗಳನ್ನು ಮರೆತು ಮಾಡಿದ ಒಂದು ಉಪಕಾರವನ್ನು ಸ್ಮರಿಸುವ ಕೃತಜ್ಞನಾದ ವ್ಯಕ್ತಿಯು ಕಃ =ಯಾರು?, ಸತ್ಯವಾಕ್ಯಃ = ಎಂಥಹ ಕಷ್ಟಕರ ಸಂದರ್ಭದಲ್ಲಿಯೂ ಸತ್ಯವನ್ನು ನುಡಿಯುವವನು ಕಃ = ಯಾರು? ದೃಢವ್ರತಃ = ಆಪತ್ಕಾಲದಲ್ಲಿಯೂ ಸಂಕಲ್ಪಿಸಿದ ಧರ್ಮವನ್ನು ಪರಿತ್ಯಾಗ ಮಾಡದವನು, ಕಃ =ಯಾರು?

ವಿಶೇಷವಿಚಾರ - ತಮ್ಮ ಆಶ್ರಮಕ್ಕೆ ಆಗಮಿಸಿದ ಪೂಜ್ಯ ನಾರದರನ್ನು ಕುರಿತು ವಾಲ್ಮೀಕಿಗಳು  ವಿನಯಪೂರ್ವಕವಾಗಿ ತಮ್ಮ ಜಿಜ್ಞಾಸೆಯನ್ನು ಮುಂದಿಡುತ್ತಿದ್ದಾರೆ. ಮುಂದಿನ ಮೂರು ಶ್ಲೋಕಗಳಲ್ಲಿ  ನಾರದರ ಬಳಿ ಏನು ಪ್ರಶ್ನೆ ಮಾಡಿದ್ದಾರೆ ಎಂಬುದನ್ನು ತಿಳಿಸಲಾಗಿದೆ.
ಕೋನು ಅಸ್ಮಿನ್’ - ‘ನುಃ ಪೃಚ್ಛಾಯಾಂ ವಿಕಲ್ಪೇ ಎಂಬ ಅಮರಕೋಶದ ಮಾತಿನಂತೆ ನು ಎಂಬ ಪದವು ಪ್ರಶ್ನಾರ್ಥದಲ್ಲಿರುತ್ತದೆ. ಅಸ್ಮಿನ್ ಎಂಬ ಪದಕ್ಕೆ ಭೂಲೋಕದಲ್ಲಿ ಎಂದರ್ಥ.

 ಸಾಂಪ್ರತಮ್’ - ಎಂಬ ಪದಕ್ಕೆ ವರ್ತಮಾನಕಾಲದಲ್ಲಿ ಎಂದರ್ಥ. ಬೇರೆ ಲೋಕದಲ್ಲಿ ಎಲ್ಲಾ ಗುಣಗಳಿಂದ ಕೂಡಿರುವವನು ವಿಷ್ಣು ಎಂದು ಪ್ರಸಿದ್ಧನಾಗಿದ್ದಾನೆ. ಅದರ ಬಗ್ಗೆ ಪ್ರಶ್ನಿಸುವುದು ವಾಲ್ಮೀಕಿಗಳ ಅಭಿಪ್ರಾಯವಲ್ಲ. ಭೂಲೋಕದಲ್ಲಿ ಯಾರು ಶ್ರೇಷ್ಠರು ಎಂದು ತಿಳಿಯುವುದು ವಾಲ್ಮೀಕಿಗಳ ಉದ್ದೇಶವಾಗಿರುವುದರಿಂದ ಅಸ್ಮಿನ್ ಲೋಕೇಎಂದು ಕೇಳಿದ್ದಾರೆ. ಮತ್ತು ಭೂಲೋಕದಲ್ಲಿಯೂ ಕೂಡ ಬೇರೆ ಕಾಲದಲ್ಲಿ ನರಸಿಂಹ ವಾಮನ ಪರಶುರಾಮ ಮೊದಲಾದ ಭಗವಂತನ ರೂಪಗಳು ಅತ್ಯಂತ ಶ್ರೇಷ್ಠವಾಗಿವೆ ಎಂಬ ವಿಚಾರವು ವಾಲ್ಮೀಕಿಗಳಿಗೆ ತಿಳಿದಿದೆ. ಆದರೆ ಈಗಿನ ಕಾಲದಲ್ಲಿ ಯಾರು  ಶ್ರೇಷ್ಠರು ? ಎಂದು ತಿಳಿಯುವುದು ವಾಲ್ಮೀಕಿಗಳ ಅಭಿಪ್ರಾಯವಾದ್ದರಿಂದ ಸಾಂಪ್ರತಂ ಎಂದು ಹೇಳಿದ್ದಾರೆ.

ಗುಣವಾನ್’ - ಸಾಮಾನ್ಯವಾಗಿ ಗುಣಸಮುದಾಯದ ಬಗ್ಗೆ ಪ್ರಶ್ನಿಸಿ ಚಕ್ರವರ್ತಿಯಲ್ಲಿ ಅವಶ್ಯವಾಗಿ ಇರಬೇಕಾದ ವಿಶೇಷಗುಣಗಳ ಬಗ್ಗೆ ಮುಂದೆ ಪ್ರಶ್ನಿಸುತ್ತಿದ್ದಾರೆ.

ಕಶ್ಚ ವೀರ್ಯವಾನ್’ - ಕಃ ಎಂಬ ಪದವನ್ನು ಪುನಃಪುನಃ ಪ್ರಯೋಗಿಸುತ್ತಿರುವುದರಿಂದ ತಮಗೆ ಪ್ರಶ್ನೆಯಲ್ಲಿರುವ ಆಸಕ್ತಿಯನ್ನು ತೋರಿಸಿದ್ದಾರೆ. ಮತ್ತು ಕಃ ಎಂಬ ಪದವನ್ನೇ ಪ್ರತಿಯೊಂದು ಗುಣಗಳ ಹಿಂದೆ ಅನುವೃತ್ತಿ ಮಾಡಿಕೊಳ್ಳಬೇಕು.

ಲೋಕದಲ್ಲಿ ಗುಣದ ಸಂಬಂಧದಿಂದ ವ್ಯಕ್ತಿಯಲ್ಲಿ ಅತಿಶಯವು ಉಂಟಾಗುತ್ತದೆ. ಆದರೆ ಇಲ್ಲಿ ವ್ಯಕ್ತಿಯ ಸಂಬಂಧದಿಂದಲೇ ಗುಣಗಳಲ್ಲಿ ಅತಿಶಯವು ಉಂಟಾಗಿದೆ. ಇದನ್ನು ತಿಳಿಸಲು ಗುಣವುಳ್ಳ ವ್ಯಕ್ತಿಯನ್ನು ಮೊದಲು ನಿರ್ದೇಶಿಸಿ ಅನಂತರ ಗುಣಗಳ ಬಗ್ಗೆ  ಉಲ್ಲೇಖಿಸಲಾಗಿದೆ.
ಮನಸ್ಸಿನ ವಿಕಾರವಾಗುವ ಕಾರಣಗಳಿದ್ದರೂ ವಿಕಾರವಾಗದಿದ್ದರೆ ವೀರ್ಯ ಎಂದು ಕರೆಯುತ್ತಾರೆ. ಇಂಥ ವೀರ್ಯವಂತರು ಯಾರು? ಅಥವಾ ದಿವ್ಯವಾದ ಅಸ್ತ್ರಶಸ್ತ್ರಗಳನ್ನು ಹೊಂದಿ ಶತ್ರುಗಳನ್ನು ನಾಶಮಾಡುವ ಸಾಮರ್ಥ್ಯವನ್ನು  ವೀರ್ಯ ಎನ್ನುತ್ತಾರೆ. ಇಂಥ ವೀರ್ಯವುಳ್ಳವರು ಯಾರು?
ಧರ್ಮಜ್ಞಶ್ಚ’ - ಶ್ರುತಿಸ್ಮೃತಿಗಳಲ್ಲಿ ಹೇಳಲ್ಪಟ್ಟ ಎಲ್ಲಾ ಬಗೆಯ ಧರ್ಮಸೂಕ್ಷ್ಮವನ್ನು ಅರಿತವನು ಯಾರು ? ಅಥವಾ ಅಲೌಕಿಕವಾದ ಶ್ರೇಯಸ್ಸಿನ ಸಾಧನೆಯ ಬಗ್ಗೆ ಸಾಮಾನ್ಯ ಜ್ಞಾನ ಹಾಗೂ ವಿಶೇಷ ಜ್ಞಾನವನ್ನು ಹೊಂದಿರುವ ಧರ್ಮಜ್ಞನು ಯಾರು? ಶಬ್ದದಿಂದ ಅನುಕ್ತವಾದದ್ದನ್ನು ಸಮುಚ್ಚಯ ಮಾಡಬೇಕು. ಮಾಡಬಾರದ ಅಧರ್ಮದ ಬಗ್ಗೆ ಸಂಪೂರ್ಣ ತಿಳುವಳಿಕೆಯುಳ್ಳವನು ಯಾರು?

ಕೃತಜ್ಞಶ್ಚ’ - ಮಾಡಿದ ಉಪಕಾರವು ಸ್ವಲ್ಪವಾಗಿದ್ದರೂ ಪ್ರಸಂಗಬಂದಾಗ ಅದನ್ನು ಬಹಳವಾಗಿ ಸ್ಮರಿಸಿಕೊಳ್ಳುವ ಕೃತಜ್ಞನು ಯಾರು? ಇಲ್ಲಿರುವ ಶಬ್ದವೂ ಕೂಡ ಅನುಕ್ತವಾದದ್ದನ್ನು ಸಮುಚ್ಚಯ ಮಾಡುತ್ತಿದೆ- ಅಪಕಾರವನ್ನು ಸ್ಮರಣೆ ಮಾಡದವನು ಯಾರು ? ಎಂದು.

ಸತ್ಯವಾಕ್ಯಃ’ - ಕಠಿಣಸಂದರ್ಭದಲ್ಲೂ ಆತ್ಮರಕ್ಷಣೆಗೆ ಸತ್ಯವನ್ನು
ಧಿಕ್ಕರಿಸಿ ಸುಳ್ಳನ್ನು ಹೇಳದವನು ಯಾರು? ರಾಮಾಯಣದಲ್ಲೇ ಮುಂದೆ ಬರುವ ಮಾತುಗಳು ಹೀಗಿವೆ - ‘ಅನೃತಂ ನೋಕ್ತಪೂರ್ವಂ ಮೇ ವಕ್ಷ್ಯೇ ಕದಾಚನಇಲ್ಲಿಯತನಕ ಸುಳ್ಳನ್ನು ಹೇಳಿಲ್ಲ. ಮುಂದೆಯೂ ಸಹ ಹೇಳುವುದಿಲ್ಲ.

ಸ್ಮರತ್ಯಪಕಾರಾಣಾಂ ಶತಮಪ್ಯಾತ್ಮವತ್ತಯಾ |
ಕಥಂಚಿದುಪಕಾರೇಣ ಕೃತೇನೈಕೇನ ತುಷ್ಯತಿ ||

ಇಲ್ಲಿ ಆತ್ಮವತ್ತಯಾ ಎಂದರೆ ತನಗಾಗಿ ಎಂದು ಆಪಾತತಃ ತೋರಬಹುದು ಆದರೆ  ಆತ್ಮಎಂದರೆ ಮನಸ್ಸುಎಂದು  ಅರ್ಥವಿರುವುದರಿಂದ ಆತ್ಮವಾನ್ಎಂದರೆ ಮನಸ್ಸುಳ್ಳವನುಎಂದರ್ಥ. ತನಗೆ ನೂರು ಅಪಕಾರವನ್ನು ಮಾಡಿದರೂ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ಯಾವಾಗಲೋ ಮಾಡಿದ ಒಂದು ಉಪಕಾರದಿಂದ ಸಂತೋಷ ಪಡುವಂತಹ  ಮನಸ್ಸುಳ್ಳವನು ಯಾರು ?

ದೃಢವ್ರತಃ’ - ಸತ್‌ಕಾರ್ಯಗಳಲ್ಲಿ ಅಚಲವಾದ ಸಂಕಲ್ಪ ಮಾಡುವುದರಲ್ಲಿ ದೊಡ್ಡವರು ಯಾರು? ಪಿತೃವಾಕ್ಯಪರಿಪಾಲನೆ ಏಕಪತ್ನಿವಿಷಯಕವಾದ ವ್ರತ ಇವುಗಳನ್ನು ಅನುಷ್ಠಾನ ಮಾಡುವವರು ಯಾರು? ಕಠಿಣವಾದ ವ್ರತಗಳನ್ನು ಕೈಗೊಂಡವರು ಯಾರು ಎಂದು ಅಭಿಪ್ರಾಯ. ಮುಂದೆ ಬರುವ ರಾಮಾಯಣದ ಶ್ಲೋಕವು ಇಲ್ಲಿ ಸ್ಮರಣೀಯ-

ಅಪ್ಯಹಂ ಜೀವಿತಂ ಜಹ್ಯಾಂ ತ್ವಾಂ ವಾ ಸೀತೇ ಸಲಕ್ಷ್ಮಣಾಮ್   |
ನಹಿ ಪ್ರತಿಜ್ಞಾಂ ಸಂಶ್ರುತ್ಯ ಬ್ರಾಹ್ಮಣೇಭ್ಯೋ ವಿಶೇಷತಃ  || ಎಂದು.

ಭೂಲೋಕದಲ್ಲಿ ಈಗಿನ ಶ್ರೇಷ್ಠ ವ್ಯಕ್ತಿ ಯಾರು ?

No comments:

Post a Comment

ಬಾಲ ಕಾಂಡ ಸರ್ಗ 1 ಸ್ಲೋಕ 5&6

ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಲು ತಾವೊಬ್ಬರೇ ಸಮರ್ಥರು ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ   | ಮಹರ್ಷೇ ತ್ವಂ ಸಮರ್ಥೋ ಽ ಸಿ ಜ್ಞಾತ...